ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು

ಕರ್ನಾಟಕ ರಾಜ್ಯದಲ್ಲಿರುವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯು 1885ರಲ್ಲಿ ಬಿ. ಎಲ್. ರೈಸ್‍ರವರನ್ನು ನಿರ್ದೇಶಕರನ್ನಾಗಿ ಅಂದಿನ ಮೈಸೂರು ಸಂಸ್ಥಾನದ ಸರ್ಕಾರ ನೇಮಕ ಮಾಡುವುದರೊಂದಿಗೆ ಪ್ರಾರಂಭಗೊಂಡಿತು. ಈ ಇಲಾಖೆಯು ಭಾರತದ ಯಾವುದೇ ರಾಜ್ಯದ ಪ್ರಾಚ್ಯವಸ್ತು ಇಲಾಖೆಗಿಂತ ಅತ್ಯಂತ ಹಳೆಯದಾಗಿದೆ. ರೈಸ್‍ರವರು ಪ್ರಮುಖವಾಗಿ ಶಾಸನಗಳ ಸರ್ವೇಕ್ಷಣೆಯ ಕಾರ್ಯದಲ್ಲಿ ಇಲಾಖೆಯನ್ನು ತೊಡಗಿಸಿ ಅಂದಿನ ಮೈಸೂರು ಸಂಸ್ಥಾನದ 8 ಜಿಲ್ಲೆಗಳು ಮತ್ತು ಕೊಡಗು ಜಿಲ್ಲೆಯಲ್ಲಿ ದೊರೆತ ಒಟ್ಟು 9000 ಶಾಸನಗಳನ್ನು ಪ್ರತಿಮಾಡಿ ಇವುಗಳನ್ನು ಎಪಿಗ್ರಾಫಿಯಾ ಕರ್ನಾಟಿಕ ಸಂಪುಟಗಳಲ್ಲಿ ಪ್ರಕಟಿಸಿದರು. ಇವರ ನಂತರ ನಿರ್ದೇಶಕರಾದ ಶ್ರೀ. ಆರ್. ನರಸಿಂಹಚಾರ್‍ರವರು ಹೊಸದಾಗಿ ಪತ್ತೆ ಮಾಡಿದ 4000 ಶಾಸನಗಳನ್ನು ಪ್ರತಿ ಮಾಡಿ ಅವುಗಳನ್ನು ಪ್ರಕಟಿಸಿದರು. ಆರ್. ನರಸಿಂಹಚಾರ್‍ರವರು ಪ್ರಕಟಿಸಿರುವ ಶ್ರವಣಬೆಳಗೊಳದ ಶಾಸನ ಸಂಪುಟ, ಶಾಸನ ಸಂಪುಟಗಳ ಪ್ರಕಟಣೆಗೆ ಮಾದರಿಯಾಗುವಂತಹ ಶ್ರೇಷ್ಠ ಪ್ರಕಟಣೆ. ಇವರು ಅಸಂಖ್ಯಾತ ಸ್ಮಾರಕಗಳನ್ನು ಸರ್ವೇಕ್ಷಣೆ ಮಾಡಿ ಅವುಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡ ವರದಿಗಳನ್ನು ಇಲಾಖೆಯ ವಾರ್ಷಿಕ ವರದಿಗಳಲ್ಲಿ ಮುದ್ರಿಸಿದರು. ಇವು ಆನಂತರದ ಇಲಾಖೆಯ ವರದಿಗಳಿಗೆ ಮಾದರಿಯಾದವು. ಇವರ ತರುವಾಯ ಶ್ರೀ ಆರ್. ಶಾಮಾಶಾಸ್ತ್ರಿಯವರು ಇಲಾಖೆಯ ನಿರ್ದೇಶಕರಾದರು. ಕೌಟಿಲ್ಯನ ಅರ್ಥಶಾಸ್ತ್ರವನ್ನು ಮೊಟ್ಟಮೊದಲಿಗೆ ಸಾರಸ್ವತ ಲೋಕಕ್ಕೆ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆ ಇವರದು. ಆರ್. ನರಸಿಂಹಾಚಾರ್ಯರು ಹೊರತಂದ ಮೈಸೂರು ಪುರಾತತ್ವ ವರದಿ ಮಾದರಿಯಲ್ಲಿ ಡಾ. ಎಂ. ಹೆಚ್. ಕೃಷ್ಣರವರು ಇಲಾಖಾ ವರದಿಗಳನ್ನು ಉತ್ತಮ ರೀತಿಯಲ್ಲಿ ಅವು ಆಕರ ಗ್ರಂಥಗಳಾಗುವಂತೆ ರಚಿಸಿ ಪ್ರಕಟಿಸಲು ಪ್ರಾರಂಭಿಸಿದರು. ವಿಶ್ವಾದ್ಯಂತ ಪ್ರಶಂಸೆಗೆ ಒಳಪಟ್ಟ ವಾರ್ಷಿಕ ಮೈಸೂರು ಪುರಾತತ್ವ ವರದಿಗಳ ಹೊಸಶ್ರೇಣಿಯನ್ನು 1928ನೇ ವರ್ಷದಿಂದ ಹೊರತಂದ ಡಾ. ಎಂ. ಎಚ್. ಕೃಷ್ಣರವರು ಅವುಗಳಲ್ಲಿ ಸ್ಮಾರಕಗಳ ವಿವರಣೆ, ಸಂರಕ್ಷಣಾ ಕಾರ್ಯ, ಹೊಸ ಶಾಸನಗಳು, ನಾಣ್ಯಗಳು, ಹಸ್ತಪ್ರತಿಗಳು ಮತ್ತು ಇಲಾಖೆಯ ಆಡಳಿತಾತ್ಮಕ ವರದಿಯನ್ನು ಸಂಯೋಜಿಸಿದ್ದರು. ಇದು ಇಲಾಖೆಯ ವರದಿಗಳಿಗೆ ವಿಶ್ವಮಾನ್ಯತೆಯನ್ನು ಒದಗಿಸಿಕೊಟ್ಟಿತು. ಅಲ್ಲದೆ, ಇವು ಇಂದಿಗೂ ಸಂಶೋಧಕರ ಮೂಲ ಸಾಮಗ್ರಿಯಾಗಿ ಬಳಸ್ಪಡುತ್ತಿರುವುದು ಅವುಗಳ ಖ್ಯಾತಿಗೆ ಹಿಡಿದ ಕೈಗನ್ನಡಿಯಾಗಿದೆ. ಇವರ ಸೇವೆಯಿಂದ ಇಲಾಖೆಯು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಯಿತು. ರಾಜ್ಯ ರಕ್ಷಿತ ಸ್ಮಾರಕಗಳ ಸಂರಕ್ಷಣೆಯನ್ನು ಕೈಗೊಳ್ಳಲು 1974ನೇ ವರ್ಷದಲ್ಲಿ ಸಂರಕ್ಷಣಾ ಶಾಖೆಯೊಂದನ್ನು ಇಲಾಖೆಯಲ್ಲಿ ಆರಂಭಿಸಲಾಯಿತು. ಆನಂತರದ ನಿರ್ದೇಶಕರ ಪೈಕಿ ಡಾ. ಶೇಷಾದ್ರಿಯವರ ಕೊಡುಗೆ ವಿಶೇಷವಾದುದು. ಇವರು ಉತ್ಖನನ ಮಾಡಿದ ಟಿ. ನರಸಿಪುರ ನೂತನ ಶಿಲಾಯುಗದ ನೆಲೆಯು ದಕ್ಷಿಣ ಭಾರತ ನೂತನ ಶಿಲಾಯುಗದ ನೆಲೆಗಳ ಕಾಲಮಾನವನ್ನು ನಿರ್ಧರಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿತು. ಇವರ ಕಾಲದಲ್ಲಿ ಪ್ರಾಚೀನ ನಿವೇಶನಾನ್ವೇಷಣೆ ಮತ್ತು ಉತ್ಖನನ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಯಿತು. ಇವರ ತರುವಾಯ ನಿರ್ದೇಶಕರಾದ ಡಾ. ಎಂ. ಎಸ್. ನಾಗರಾಜರಾವ್‍ರವರ ಕಾಲದಲ್ಲಿ ಸಹ ಇದೇ ಬಗೆಯ ಕಾರ್ಯಗಳು ಮುಂದುವರೆದವು. ಡಾ. ಎಂ. ಎಸ್. ನಾಗರಾಜರಾವ್ ಸಂಗನಕಲ್ಲು, ತಡಕನ ಹಳ್ಳಿ, ಕೊಮರನಹಳ್ಳಿ ಮತ್ತು ಹಳ್ಳೂರುಗಳಲ್ಲಿ ಭೂಉತ್ಖನನಗಳನ್ನು ಕೈಗೊಂಡು ಅಲ್ಲಿ ಸೂಕ್ಷ್ಮಶಿಲಾಯುಗ, ನೂತನಶಿಲಾಯುಗ ಮತ್ತು ಬೃಹತ್ ಶಿಲಾಯುಗದ ನೆಲೆಗಳನ್ನು ಬೆಳಕಿಗೆ ತಂದರು. ಹಳ್ಳೂರು ಉತ್ಖನನ ದಕ್ಷಿಣ ಭಾರತದ ಕಬ್ಬಿಣ ಯುಗದ ಅತ್ಯಂತ ಪ್ರಾಚೀನ ನೆಲೆಯಾಗಿ ಕಂಡುಬಂದುದು ಇಲ್ಲಿನ ವಿಶೇಷ. ಇವರು ಪ್ರಾರಂಭಿಸಿದ ಹಂಪಿ ಪುನರುತ್ಥಾನ ಯೋಜನೆಯಿಂದಾಗಿ ಇಂದು ಹಂಪಿ ವಿಶ್ವಪರಂಪರೆಯ ಸ್ಮಾರಕಗಳಲ್ಲಿ ಒಂದಾಗಿ ಪರಿವರ್ತಿತಗೊಂಡಿದೆ.

ಕರ್ನಾಟಕ ರಾಜ್ಯವು ಅತ್ಯಂತ ಪುರಾತನ ಸ್ಮಾರಕಗಳನ್ನು ಹೊಂದಿದ್ದು, ಸಾಂಸ್ಕøತಿಕ ನೆಲೆಗಳನ್ನು ಹಾಗೂ ತನ್ನದೇ ಆದ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಕ್ರಿ. ಪೂ. 10000 ವರ್ಷಗಳಿಗೂ ಹಿಂದಿನ ಪ್ರಾಗೈತಿಹಾಸಿಕ ನೆಲೆಗಳ ಹಾಗೂ ಆದಿ ಮಾನವರು ಶಿಲೆಯಲ್ಲಿ ಕೊರೆದಿರುವ ಚಿತ್ರಗಳು ಸಹ ಉಳಿದುಕೊಂಡು ಬಂದಿವೆ.

ಕರ್ನಾಟಕವನ್ನಾಳಿದ ಪ್ರಭಾವಶಾಲಿ ರಾಜಮನೆತನಗಳು ಅವರ ಆಳ್ವಿಕೆಯ ಅವಧಿಯಲ್ಲಿ ಅನೇಕ ಸ್ಮಾರಕಗಳನ್ನು ಸಾಂಸ್ಕøತಿಕ ಕುರುಹನ್ನಾಗಿ ಅವರ ಮುಂದಿನ ಪೀಳಿಗೆಗೆ ಉಳಿಸಿ ಹೋಗಿರುತ್ತಾರೆ. ಈ ರಾಜಮನೆತನಗಳಲ್ಲಿ ಪ್ರಮುಖವಾದವುಗಳೆಂದರೆ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು. ವಿಜಯನಗರದ ಅರಸರು, ಮೈಸೂರು ಒಡೆಯರು, ಮುಸ್ಲಿಂ ರಾಜಮನೆತನಗಳಲ್ಲಿ ಬಹಮನಿ, ಆದಿಲ್ ಶಾಹಿ, ಬರಿದ್‍ಶಾಹಿಗಳು ಪ್ರಮುಖರು. ಕರ್ನಾಟಕದಲ್ಲಿ ಸುಮಾರು 25000-30000 ಅಘೋಷಿತ ಸ್ಮಾರಕಗಳಿವೆ. ರಾಜ್ಯದಲ್ಲಿರುವ ರಾಜ್ಯ ಸಂರಕ್ಷಿತ ಸ್ಮಾರಕಗಳ ಸಂಖ್ಯೆ: 832

ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವನ್ನು ಮತ್ತು 2004ರಲ್ಲಿ ಹೊಸದಾಗಿ ಆರಂಭಗೊಂಡ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಬೆಂಗಳೂರು, ಈ ಇಲಾಖೆಗಳನ್ನು ಸರ್ಕಾರಿ ಆದೇಶದ ಸಂಖ್ಯೆ: ಕಸಂವಾಪ್ರ 10 ಕೆಎಂಯು 2012 ದಿನಾಂಕ 23-2-2012ರ ಮೇರೆಗೆ ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಎಂಬುದಾಗಿ ಪುನರ್‍ರಚಿಸಿರುತ್ತದೆ. ಇಲಾಖಾ ಮುಖ್ಯಸ್ಥರನ್ನಾಗಿ ಆಯುಕ್ತರನ್ನು ನೇಮಿಸಲಾಗಿದೆ.

ಇಲಾಖೆಯ ಆಡಳಿತದ ವ್ಯಾಪ್ತಿಯಲ್ಲಿ ಮೈಸೂರು (ಪರಂಪರೆ), ಮಂಗಳೂರು, ಬೆಂಗಳೂರು, ಧಾರವಾಡ ಹಾಗೂ ಕಮಲಾಪುರ (ಹಂಪಿ)ಯಲ್ಲಿ ಉಪನಿರ್ದೇಶಕರ ಕಛೇರಿಗಳು ಇವೆ. ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಶ್ರೀರಂಗಪಟ್ಟಣ ಹಾಸನ, ಮಡಿಕೇರಿ, ಮಂಗಳೂರು, ಕಿತ್ತೂರು, ಗದಗ, ಗುಲ್ಬರ್ಗಾ, ರಾಯಚೂರು, ಹೂವಿನಹಡಗಲಿ ಸೇರಿದಂತೆ ಒಟ್ಟು ಹದಿಮೂರು ಸಂಗ್ರಹಾಲಯಗಳಿವೆ ಹಾಗೂ ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ಮತ್ತು ಅಥಣಿಯಲ್ಲಿ ಶಿಲ್ಪಗಳ ಗ್ಯಾಲರಿಗಳಿವೆ. 128 ವರ್ಷಗಳ ಸುದೀರ್ಘ ಇತಿಹಾಸ ಈ ಇಲಾಖೆಗಿದೆ.

ನಿರ್ದೇಶಕರು(ಪ್ರಾಚ್ಯವಸ್ತು), ನಿರ್ದೇಶಕರು(ವಸ್ತುಸಂಗ್ರಹಾಲಯಗಳು), ಉಪ ನಿರ್ದೇಶಕರು, ಪುರಾತತ್ವ ಸಂರಕ್ಷಣಾ ಇಂಜಿನಿಯರ್, ನೋಂದಣಾಧಿಕಾರಿ, ಪತ್ರಾಂಕಿತ ಸಹಾಯಕರು, ಸಹಾಯಕ ನಿರ್ದೇಶಕರು, ಪುರಾತತ್ವ ಸಂರಕ್ಷಣಾ ಸಹಾಯಕರು, ಕ್ಯೂರೇಟರ್, ಪುರಾತತ್ವ ಸಹಾಯಕರು, ಸಹಾಯಕ ಕ್ಯೂರೇಟರ್ ಹಾಗೂ ಇತರ ಸಿಬ್ಬಂದಿಗಳ ಸಹಕಾರದೊಂದಿಗೆ ಇಲಾಖೆಯು ಮುನ್ನಡೆಯುತ್ತಲಿದ್ದು ವಿಸ್ತರಣೆಯ ಹಾದಿಯಲ್ಲಿದೆ.

ಈ ಇಲಾಖೆಯ ಮುಖ್ಯ ಕಾರ್ಯ ಚಟುವಟಿಕೆಗಳೆಂದರೆ ಅನ್ವೇಷಣೆ, ಉತ್ಖನನ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಶಾಸನಗಳ ಸರ್ವೇಕ್ಷಣೆ, ಕಲಾಕೃತಿಗಳ ನೋಂದಣಿ, ಪ್ರಾಚೀನ ನಾಣ್ಯಗಳ ಅಧ್ಯಯನ, ಸಂಶೋಧನಾ ಗ್ರಂಥಗಳ ಪ್ರಕಟಣೆ, ವಸ್ತು ಸಂಗ್ರಹಾಲಯಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಮತ್ತು ಪರಂಪರೆ ಕಾರ್ಯ ಚಟುವಟಿಕೆಗಳು, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು, ವಸ್ತುಪ್ರದರ್ಶನ, ವಿಚಾರ ಸಂಕಿರಣ, ಕಾರ್ಯಾಗಾರ, ಪಾರಂಪರಿಕ ನಡಿಗೆ ಇತ್ಯಾದಿ.,

ಅವಜ್ಞತೆಗೆ ತುತ್ತಾಗಿರುವ ಅಮೂಲ್ಯವಾದ ಪುರಾತನ ಶಿಲ್ಪಗಳು, ಪ್ರಾಚೀನ ಶಿಲಾಶಾಸನಗಳು, ನಾಣ್ಯಗಳು, ತಾಮ್ರ ಪಟಗಳು ಮುಂತಾದವುಗಳನ್ನು ಇಲಾಖೆಯ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶಿಸುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಜವಾಬ್ದಾರಿಯನ್ನು ಇಲಾಖೆಯು ನಿರ್ವಹಿಸುತ್ತಾ ಬರುತ್ತಿದೆ. ಸಂರಕ್ಷಿತ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯನ್ನು ಇಲಾಖೆಯು ಸ್ವತಂತ್ರವಾಗಿಯೂ ಮತ್ತು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‍ನ ಸಹಯೋಗದೊಡನೆ ಕೈಗೊಳ್ಳುತ್ತಿದೆ.

ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಉನ್ನತ ಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಪುರಾತತ್ವಜ್ಞರ ಸಲಹೆಗಳನ್ನು ಪಡೆದ ನಂತರ ಸಂರಕ್ಷಣೆಗಾಗಿ ಸ್ಮಾರಕಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಸರ್ಕಾರದ ಕಾರ್ಯದರ್ಶಿಗಳವರು ಅಧ್ಯಕ್ಷರಾಗಿರುವ ತಾಂತ್ರಿಕ ಸಲಹಾ ಸಮಿತಿಯಲ್ಲಿ ಅನುಮೋದನೆ ಪಡೆದು ಸಂರಕ್ಷಣಾ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಈ ಇಲಾಖಾ ವತಿಯಿಂದ ಸಂರಕ್ಷಣೆಗೆಂದು ಆಯ್ಕೆ ಮಾಡಿಕೊಂಡಿರುವ ಸ್ಮಾರಕಗಳ ಕ್ರಿಯಾಯೋಜನೆಯು ಸರ್ಕಾರದಿಂದ ಅನುಮೋದನೆಗೊಂಡಿವೆ.

ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಸಂರಕ್ಷಣೆಯ ವಿಧಿ ವಿಧಾನಗಳಿಗನುಸಾರವಾಗಿ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಇವುಗಳ ಪರಿಸರ ಹಾಗೂ ಮೂಲ ಸ್ವರೂಪಕ್ಕೆ ಹೊಂದಿಕೆಯಾಗುವಂತೆ ಸಂರಕ್ಷಣಾ ಕಾರ್ಯ ನಿರ್ವಹಿಸಲಾಗುತ್ತಿದ್ದು, ಪುರಾತನ ಸ್ಮಾರಕಗಳ ವಿನ್ಯಾಸ ಮತ್ತು ಆ ಕಾಲದ ತಾಂತ್ರಿಕತೆಯ ಹೊರತಾಗಿ ಯಾವುದೇ ರೀತಿಯ ಹೊಸ ವಿಧಾನಗಳನ್ನು ಈ ಸಂರಕ್ಷಣಾ ಕಾರ್ಯದಲ್ಲಿ ಅಳವಡಿಸಿಕೊಂಡಿರುವುದಿಲ್ಲ. ಸ್ಮಾರಕಗಳನ್ನು ಸಂರಕ್ಷಿಸುವ ಮೊದಲು ಮತ್ತು ಸಂರಕ್ಷಣೆ ಕೈಗೊಳ್ಳುವಾಗ ಮತ್ತು ಸಂರಕ್ಷಣೆ ಮುಗಿದ ನಂತರ ಛಾಯಾಚಿತ್ರದೊಂದಿಗೆ ದಾಖಲೆ ಮಾಡಿಕೊಳ್ಳಲಾಗುತ್ತಿದೆ. ಕಾಮಗಾರಿಗಳನ್ನು ಆಗಿಂದಾಗ್ಗೆ ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡಲಾಗುತ್ತಿದೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಈ ಇಲಾಖಾ ವತಿಯಿಂದ ಕೈಗೊಳ್ಳಲಾಗುತ್ತಿರುವ ಸಂರಕ್ಷಣಾ ಕಾಮಗಾರಿಗಳನ್ನು ಸಂರಕ್ಷಣಾ ಕಾಮಗಾರಿಗಳಲ್ಲಿ ಅನುಭವ ಪಡೆದಿರುವ ನುರಿತ ಗುತ್ತಿಗೆದಾರರ ಮೂಲಕ ಪಾರದರ್ಶಕ ಅಧಿನಿಯಮದಡಿ ಕೈಗೊಳ್ಳಲಾಗುತ್ತಿದೆ.

ಪ್ರಸ್ತುತ ಕೇಂದ್ರ ಕಛೇರಿಯು ಮೈಸೂರಿನಲ್ಲಿದ್ದು ಕಲೆ ಮತ್ತು ಸಂಸ್ಕøತಿಗೆ ಸಂಬಂಧಿಸಿದ ಯೋಜನೆ ಮತ್ತು ಯೋಜನೇತರ ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರುತ್ತಿದೆ.

ಪಾರಂಪರಿಕ ಪ್ರದೇಶಗಳಾದ ಮೈಸೂರು, ಶ್ರೀರಂಗಪಟ್ಟಣ, ಬೀದರ್, ಗುಲ್ಬರ್ಗಾ, ಬಿಜಾಪುರ ಹಾಗೂ ಕಿತ್ತೂರು ಸೇರಿದಂತೆ ಒಟ್ಟು ಆರು ಪಾರಂಪರಿಕ ಪ್ರದೇಶಗಳ ಮತ್ತು ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಈ ಇಲಾಖೆಯು ನಿರ್ವಹಿಸುತ್ತಿದೆ. ಇದಲ್ಲದೆ 2012-13ನೇ ಸಾಲಿನ ಅಯವ್ಯಯ ಭಾಷಣದಲ್ಲಿ ಸನ್ನತಿ, ನಾಗಾವಿ, ಕುಮ್ಮಟಗಿ, ಬಾದಾಮಿ, ಐಹೊಳೆ, ಬೆಂಗಳೂರು, ಲಕ್ಕುಂಡಿ, ಬನವಾಸಿ, ತಲಕಾಡು, ಬಳ್ಳಿಗಾವಿ, ಬೇಲೂರು, ಹಳೇಬೀಡು, ಮುಲೇಖೇಡು, ಮೇಲುಕೋಟೆ ಈ ಹದಿನಾಲ್ಕು ಪ್ರದೇಶಗಳನ್ನು ಪಾರಂಪರಿಕ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ.

1. ರಾಜ್ಯ ಸರ್ಕಾರದ ಅನುದಾನದಲ್ಲಿ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನ

ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ರಾಜ್ಯ ಸರ್ಕಾರದ ವತಿಯಿಂದ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವಾರ್ಷಿಕ ಕ್ರಿಯಾಯೋಜನೆಯನ್ನು ಸಿದ್ದಪಡಿಸಿಕೊಂಡು ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡು ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

2. 13ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಸ್ಮಾರಕಗಳ ಸಂರಕ್ಷಣೆ

ರಾಜ್ಯವ್ಯಾಪ್ತಿಯಲ್ಲಿರುವ ಈ ಪುರಾತನ ಸ್ಮಾರಕಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 13ನೇ ಹಣಕಾಸಿನ ಅನುದಾನದ ಪರಂಪರೆ ಸಂರಕ್ಷಣೆಯಡಿ ಒಟ್ಟಾರೆ 100.00ಕೋಟಿಗಳ ಅನುದಾನವನ್ನು ನೀಡಿರುತ್ತದೆ. ಈ ಯೋಜನೆಯು ನಾಲ್ಕು ವರ್ಷಗಳ ಅವಧಿಯದಾಗಿದ್ದು, 2011-12 ರಿಂದ 2014-15ನೇ ಆರ್ಥಿಕ ವರ್ಷಕ್ಕೆ ಮುಕ್ತಾಯಗೊಳ್ಳಲಿದೆ. ಈ ಯೋಜನೆಯಡಿ ಒಟ್ಟು 137 ಸ್ಮಾರಕಗಳನ್ನು ಸಂರಕ್ಷಣೆಗಾಗಿ ಕ್ರಿಯಾಯೋಜನೆಯನ್ನು ಸಿದ್ದಪಡಿಸಿಕೊಂಡು ಉನ್ನತ ಸಲಹಾ ಸಮಿತಿಯ ಅನುಮೋದನೆಯನ್ನು ಪಡೆದ ನಂತರ ಅಂದಾಜುಪಟ್ಟಿಗೆ ಇಲಾಖೆಯ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಸಮಿತಿಯ ಅನುಮೋದನೆ ನಂತರ ಕರ್ನಾಟಕ ಪಾರದರ್ಶಕ ನಿಯಮಾನುಸಾರ ಟೆಂಡರ್ ಪ್ರಕ್ರಿಯೆಗೊಂಡು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
3. ಸರ್ಕಾರ-ಖಾಸಗಿ-ಸಾರ್ವಜನಿಕ ಸಹಯೋಗದೊಡನೆ ಸ್ಮಾರಕಗಳ ಸಂರಕ್ಷಣೆ

ಇದೊಂದು ಅಪೂರ್ವವಾದ ಉದಾಹರಣೆ. ಸ್ಥಳೀಯ ಸಾರ್ವಜನಿಕರ ಸಕ್ರಿಯೆವಾಗಿ ಪಾಲ್ಗೊಳ್ಳುವಿಕೆಯೊಡನೆ ಆಸಕ್ತ ಖಾಸಗಿ ಸಂಸ್ಥೆಗಳು ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗುತ್ತಿವೆ. ಆಯ್ದ ಸ್ಮಾರಕಗಳ ಸಂರಕ್ಷಣೆಗಾಗಿ ಈ ಇಲಾಖೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‍ನೊಡನೆ 2002-03ನೇ ಸಾಲಿನಿಂದ ಒಡಂಬಡಿಕೆ ಮಾಡಿಕೊಂಡಿದೆ. ಈ ಯತ್ನವು ಫಲಪ್ರದವಾಗಿ ಮುಂದುವರಿಯುತ್ತಿದೆ. ಇದಕ್ಕೆ ತಗಲುವ ವೆಚ್ಚವನ್ನು 40:40:20 ಅನುಪಾತದಲ್ಲಿ (ಸರ್ಕಾರ:ಖಾಸಗಿ:ಸಾರ್ವಜನಿಕ) ಭರಿಸಲಾಗುತ್ತಿದೆ. ಸ್ಮಾರಕಗಳ ಪರಿಸರ ರಕ್ಷಣೆಯಾದ ಸೌಂದರ್ಯೀಕರಣ, ಲ್ಯಾಂಡ್‍ಸ್ಕೇಪಿಂಗ್ ಇತ್ಯಾದಿಗಳಲ್ಲಿ ಇಂಟ್ಯಾಕ್, ಕರ್ನಾಟಕ ಸಂಸ್ಥೆಯು ಪಾಲ್ಗೊಂಡಿರುತ್ತದೆ.

4. ಖಾಸಗಿ ಸಂಸ್ಥೆಗಳು ಮತ್ತು ಮಹನೀಯರು ಸ್ಮಾರಕಗಳ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಿಕೆ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಖಾಸಗಿ ವ್ಯಕ್ತಿಗಳೂ ಕೂಡ ನಿಯಮಗಳನ್ನು ಅನುಸರಿಸಿದನಂತರ ಈ ಕಾರ್ಯವನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಉದ್ದೇಶಕ್ಕಾಗಿ ಅನಿವಾಸಿ ಭಾರತೀಯರೂ ಸಹ ಅರ್ಹತೆ ಹೊಂದಿರುತ್ತಾರೆ.

About kararch

This is the Official Website of Department of Archaeology, Museums and Heritage, Government of Karnataka, under the Ministry of Culture that is responsible for archaeological studies and the preservation of cultural monuments. The function is to "explore, excavate, conserve, preserve and protect the monuments and sites of State, National & International Importance.

Comments are closed.